ದಿನೇಶ್ ಗುಂಡೂರಾವ್ ಅವರ ಮೇಲೆ ಜಗ್ಗೇಶ್ ವಾಗ್ದಾಳಿ

ಬೆಂಗಳೂರು

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಗಳನ್ನು ನೋಡಿದರೆ, ಅವರ ತಂದೆ ಸರಿಯಾಗಿ ಸಂಸ್ಕಾರ ಕಲಿಸಿಲ್ಲವೆಂದು ಅನಿಸುತ್ತದೆ ಎಂದು ಚಿತ್ರನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಬಗ್ಗೆ ಏಕ ವಚನದಲ್ಲಿ ಮಾತನಾಡುವ ಮೊದಲು ಅವರ ವಯಸ್ಸು ತಿಳಿಯಲಿ. ಸಾರ್ವಜನಿಕ ಸ್ಥಳದಲ್ಲಿ ಹಿರಿಯರ ಬಗ್ಗೆ ಹೇಗೆ ಮಾತನಾಡಬೇಕು ಎಂಬ ಸಂಸ್ಕಾರವನ್ನು ಗುಂಡೂರಾವ್ ಅವರು ತಮ್ಮ ಮಗನಿಗೆ ಕಲಿಸಿಲ್ಲ ಎನ್ನುವ ಅನುಮಾನ ಮೂಡಿತ್ತಿದೆ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಮೊದಲು, ತಮ್ಮ ಪಕ್ಷದವರ ಸಾಧನೆ ತಿಳಿಯಲಿ ಎಂದು ಹೇಳಿದರು. 

ದಿನೇಶ್ ಗುಂಡೂರಾವ್ ಎರಡು ವರ್ಷದವರಿದ್ದಾಗ, ಯಡಿಯೂರಪ್ಪ ರಾಜಕೀಯ ಜೀವನ ಆರಂಭಸಿದರು. ಆರು ಬಾರಿ ಶಾಸಕರಾಗಿ, ಒಂದು ಬಾರಿ ಪರಿಷತ್ ಸದಸ್ಯ ಹಾಗೂ ಸಂಸದರಾಗಿ ಆಯ್ಕೆಯಾಗಿರುವ ಹಿರಿಯ ರಾಜಕಾರಣಿ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ. ಪಕ್ಷದ ಕಾರ್ಯಾಧ್ಯಕ್ಷ ಹುದ್ದೆ ನೀಡಿದ ಮಾತ್ರಕ್ಕೆ, ತಮ್ಮನ್ನು ತಾವೇ ರಾಹುಲ್ ಗಾಂಧಿ ಸಮಾನ ಎನ್ನುವ ಕಲ್ಪನೆಯಿಂದ ಹೊರಬರಲಿ ಎಂದು ಟೀಕಿಸಿದರು. 

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಆಹಾರ ಸರಬರಾಜು ಸಚಿವರಾಗಿದ್ದಾಗ ನಡೆದಿರುವ ಅವ್ಯವಹಾರಗಳ ಬಗ್ಗೆ ಮೊದಲು ನೋಡಿಕೊಳ್ಳಲ್ಲಿ. ನಂತರ ಬಿಜೆಪಿಯವರ ಬಗ್ಗೆ ಮಾತನಾಡಲಿ. ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯದ ರೈತರ ಸಮಸ್ಯೆ ಪರಿಹಾರಕ್ಕೆಂದು ೩೦ ಜಿಲ್ಲೆಗಳನ್ನು ಸುತ್ತಿದ್ದಾರೆ. ಆದರೆ ಗುಂಡೂರಾವ್ ಒಂದು ಜಿಲ್ಲೆಗಾದರೂ ಭೇಟಿ ನೀಡಿದ್ದಾರಾ ಎಂದು ಪ್ರಶ್ನಿಸಿದರು. 

ಉಗ್ರಪ್ಪ ಬಗ್ಗೆ ಡಿಕೆಶಿ ಎಚ್ಚರವಹಿಸಲಿ

ಉಗ್ರಪ್ಪನವರು ರಾಜಕೀಯವಾಗಿ ಹೇಗೆ ಬಂದರೂ ಎನ್ನುವ ಅರಿವಿದೆ. ಮೊದಲು ದೇವೇಗೌಡರಿಗೆ ಬೆಣ್ಣೆ ಹಚ್ಚಿ ಕೆಲಸ ಮಾಡಿಸಿಕೊಂಡರು. ನಂತರ ಮಲ್ಲಿಕಾರ್ಜುನ ಖರ್ಗೆ ಅವರ ಸೂಟ್‌ಕೇಸ್ ಹಿಡಿದುಕೊಂಡು ಓಡಾಡಿರುವುದನ್ನು, ನಾನೇ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನೋಡಿದ್ದೇನೆ. ಈಗ ಖರ್ಗೆ ಬದಲಿಗೆ ಸಿದ್ದರಾಮಯ್ಯ ಅವರ ಸೂಟ್‌ಕೇಸ್ ಹಿಡಿಯುತ್ತಿದ್ದಾರೆ. ಮುಂದಿನ ದಿನದಲ್ಲಿ ಡಿ.ಕೆ ಶಿವಕುಮಾರ್ ಅವರ ಸೂಟ್‌ಕೇಸ್ ತಗೆದುಕೊಳ್ಳುತ್ತಾರೆ. ಇಂತವರ ಬಗ್ಗೆ ಡಿಕೆಶಿ ಎಚ್ಚರವಹಿಸಬೇಕು ಎಂದರು.

ಮೊದಲು ಇವರು ಸತ್ಯವನ್ನು ಹೇಳಲಿ

ಸತ್ಯಮೇವ ಜಯತೇ ಎನ್ನುವ ಹೆಸರಲ್ಲಿ ರ‍್ಯಾಲಿ ಮಾಡಲು ಹೊರಟಿರುವ ಕಾಂಗ್ರೆಸ್‌ನವರು ಮೊದಲಿಗೆ ತಮ್ಮ ಪಕ್ಷದವರ ಮೇಲೆ ನಡೆದಿರುವ ಆದಾಯ ತೆರಿಗೆ ರೈಡ್‌ಗಳ ಬಗ್ಗೆ ಸತ್ಯ ಹೇಳಲಿ. ನಂತರ ಇತರೆ ಸತ್ಯಗಳನ್ನು ಹೇಳಲಿ ಎಂದು ಜಗ್ಗೇಶ್ ಟೀಕಿಸಿದರು. 

ಇವರ ಪಕ್ಷದವರು ಮಾಡಿರುವ ಕಾಮನ್‌ವೆಲ್ತ್, ೨ಜಿ ಹಗರಣ ಜಗತ್ತಿಗೆ ಕಾಣುತ್ತಿವೆ. ಇವರಿಗೆ ಸತ್ಯಮೇವ ಜಯತೇ ಎನ್ನುವ ನೈತಿಕತೆಯಿಲ್ಲ. ಕೇವಲ ಚುನಾವಣಾ ಪ್ರಚಾರಕ್ಕೆ ಈ ರೀತಿಯ ತಂತ್ರಗಾರಿಕೆ ಮಾಡುತ್ತಿದ್ದಾರೆಂದು ಜನರಿಗೆ ಗೊತ್ತಿದೆ. ಕರ್ನಾಟಕ ಮುಕ್ತ ಕಾಂಗ್ರೆಸ್ ಆಗುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸವ್ಯಕ್ತಪಡಿಸಿದರು. 

Leave a comment