ಪಂಚ ರಾಜ್ಯ ಫಲಿತಾಂಶದ ಬೆನ್ನಲ್ಲೆ ಚುರುಕಾದ ರಾಜ್ಯ ರಾಜಕೀಯ

parisatಬೆಂಗಳೂರು
ಪಂಚ ರಾಜ್ಯ ಚುನಾವಣೆ ಫಲಿತಾಂಶ ಹೊರಬರುತ್ತಲೆ, ರಾಜ್ಯದಲ್ಲಿ ಚುನಾವಣೆ ಕಾವು ಆರಂಭವಾಗಿದ್ದು ಎಲ್ಲ ಪಕ್ಷಗಳು ತಮ್ಮ ಚುನಾವಣಾ ರಣತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದಾರೆ.

ಒಂದೆಡೆ ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಬಿಜೆಪಿ, ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಅದೇ ಸಾಧನೆ ಮಾಡಿ, ಅಧಿಕಾರದ ಚುಕ್ಕಾಣಿ ಹಿಡಿಯುವ ಆತುರದಲ್ಲಿದ್ದರೆ, ಇನ್ನೊಂದೆಡೆ ಪಂಜಾಬ್ನಲ್ಲಿ ಮಾತ್ರ ಅಸ್ಥಿತ್ವ ಕಾಪಾಡಿಕೊಂಡಿರುವ ಕಾಂಗ್ರೆಸ್ ಯಾವುದೇ ಕಾರಣಕ್ಕೂ ದಕ್ಷಿಣ ಭಾರತದ ಪ್ರಮುಖ ರಾಜ್ಯವಾಗಿರುವ ಕರ್ನಾಕವನ್ನು ಬಿಟ್ಟುಕೊಡಬಾರದು ಎನ್ನುವ ಹಠದೊಂದಿಗೆ ಚುನಾವಣಾ ತಯಾರಿ ಆರಂಭಿಸಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಸಿಲುಕಿರುವ ಜೆಡಿಎಸ್, ಪ್ರಾದೇಶಿಕ ಪಕ್ಷ ಎನ್ನುವ ಹೆಸರಿನಲ್ಲಿ ಅಧಿಕಾರ ಹಿಡಿಯಬೇಕೆಂದು, ಸದ್ದಿಲ್ಲದೆ ತಾಲೀಮು ಆರಂಭಿಸಿದೆ.

ಮೋದಿ ಹವಾ ಬಳಸಿಕೊಳ್ಳಲು ಬಿಜೆಪಿ ಸಿದ್ಧತೆ

2014ರ ಲೋಕಸಭಾ ಚುನಾವಣೆ ಬಳಿಕ, ಬಂದಿರುವ ದೇಶದ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ತಂತ್ರಗಾರಿಕೆ ಬಳಸಿಕೊಂಡು, ಗೆಲುವು ಸಾಧಿಸುತ್ತಿರುವ ಬಿಜೆಪಿ,  ಕರ್ನಾಟಕದಲ್ಲಿಯೂ ಇದನ್ನೆ ಮುಂದುವರಿಸುವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಮೋದಿ ಅವರ ಜನಪ್ರಿಯತೆ ಬಳಸಿಕೊಂಡು, ಅನೇಕ ನಾಯಕರನ್ನು ತಮ್ಮತ್ತ ಸೆಳೆಯುವಲ್ಲಿ ಬಿಜೆಪಿ ಯಶ ಕಂಡಿದೆ. ಇನ್ನು ಚುನಾವಣೆ ಹತ್ತಿರವಾಗುತ್ತಿದ್ದ ಹಾಗೇ, ಮೋದಿ ಅವರ ರೋಡ್ ಶೋಗಳನ್ನು ಸರಿಯಾದ ಸಮಯಕ್ಕೆ ಪ್ರಯೋಗಿಸಿ, ಮತದಾರರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ.

ಇದರೊಂದಿಗೆ ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಯಡಿಯೂರಪ್ಪ ಅವರನ್ನು ಘೋಷಿಸಿದ್ದು, ಇದರಿಂದ ವೀರಶೈವ ಮತದಾರರನ್ನು ತಮ್ಮತ್ತ ಸೆಳೆಯಲು ಬಹುತೇಕ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಅಮಿತ್ ಶಾ ಅವರ ತಂತ್ರಗಾರಿಕೆ ಬಳಸಿಕೊಂಡು, ಉತ್ತರ ಪ್ರದೇಶದ ಮಾದರಿಯಲ್ಲಿ ಜಾತಿ ಮೀರಿದ ಚುನಾವಣೆ ನಡೆಸಲು ಸಿದ್ಧತೆ ನಡೆಸಿದೆ.

ಬಜೆಟ್ನಿಂದ ಅಧಿಕಾರಕ್ಕೆರುವ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್

ಇನ್ನು ನಡೆದ ಚುನಾವಣೆಗಳಲೆಲ್ಲ ಸೋಲನುಭವಿಸಿ ಹೈರಾಣಾಗಿರುವ ಕಾಂಗ್ರೆಸ್, ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಸೋಲದಿರಲು ನಿರ್ಧರಿಸಿದಂತಿದೆ. ಇದಕ್ಕೆ ಪೂರಕವಾಗಿ ಜನರನ್ನು ತಲುಪಲು ಮಾ.15ರಂದು ಮಂಡಿಸುವ ಅಂತಿಮ ಬಜೆಟ್ ಬಳಸಿಕೊಳ್ಳಲು ಹೈಕಮಾಂಡ್ನಿಂದ ರಾಜ್ಯ ನಾಯಕರಿಗೆ ಸೂಚನೆಯೂ ರವಾನೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುವ ಅಂತಿಮ ಬಜೆಟ್ನಲ್ಲಿ “ಸರ್ವರಿಗೂ ಸಮಾನ ಪಾಲು” ಎನ್ನುವ ಮಾತನ್ನು ಪಾಲಿಸಿ, ಅಹಿಂದ ವರ್ಗದೊಂದಿಗೆ ಇತರೆ ವರ್ಗಗಳ ವೋಟ್ಗಳನ್ನು ಪಡೆಯಲು ಸಜ್ಜುಗೊಂಡಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ, ಸಾಮೂಹಿಕ ನಾಯಕತ್ವಕ್ಕೆ ಮಣೆಹಾಕಲು ನಿರ್ಧರಿಸಿದಂತಿದೆ. ಇದರಿಂದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಳಸಿಕೊಂಡು ದಲಿತ ಮತ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕುರುಬರ ಮತಗಳನ್ನು ಪಡೆಯುವ ಲೆಕ್ಕಾಚಾರದಲ್ಲಿ ತೊಡಗಿದೆ.

ಆದರೆ ಪಕ್ಷ ಸಂಘಟನೆ ವಿಚಾರದಲ್ಲಿ ಮಾತ್ರ ಸದ್ಯಕ್ಕೆ ಬಿಜೆಪಿಯನ್ನು ಹೋಲಿಸಿಕೊಂಡರೆ, ಕಾಂಗ್ರೆಸ್ ಹಿಂದಿದೆ ಎನ್ನುಬಹುದು. ಕೇವಲ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಹೊರೆತುಪಡೆಸಿ ಇನ್ಯಾವುದೇ ನಾಯಕರು ಹೆಚ್ಚು ಗಮನ ಹರಿಸಿದಂತಿಲ್ಲ. ಗೂಂಡೂರಾವ್ ಒಬ್ಬರೇ, ರಾಜ್ಯದ  ಪ್ರತಿ ಭಾಗಗಳಿಗೆ ಭೇಟಿ ನೀಡಿದ್ದು ಪಕ್ಷ ಸಂಘಟನೆಗೆ ಅಗತ್ಯವಿರುವ ಸಭೆ ಸಮಾರಂಭಗಳನ್ನು ನಡೆಸುತ್ತಿದ್ದಾರೆ.

ಇಬ್ಬರ ಜಗಳದಲ್ಲಿ ಜೆಡಿಎಸ್ಗೆ ಲಾಭ?

ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್, ಈಗಾಗಲೇ ತನ್ನ ರಣತಂತ್ರ ಆರಂಭಿಸಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ಜಗಳವನ್ನು ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಕೆಸರೆರಚಾಟದಲ್ಲಿ ಭಾಗವಹಿಸದೇ, ದೂರದಲ್ಲಿ ನಿಂತು ರಾಜಕೀಯ ವಿದ್ಯಮಾನಗಳನ್ನು ನೋಡುವಂತೆ ಜೆಡಿಎಸ್ ವರಿಷ್ಠರಿಂದ ಖಡಕ್ ಸೂಚನೆ ಪಕ್ಷದ ನಾಯಕರಿಗೆ ತಲುಪಿದೆ.

ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನುಕೂಲವಾಗುವುದಿಲ್ಲ. ರಾಜ್ಯದ ಸಮಸ್ಯೆಗೆ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಪರಿಹಾರ ಸಾಧ್ಯ ಎಂದು ಹೇಳಿಕೊಂಡು ಕುಮಾರಸ್ವಾಮಿ ಹಾಗೂ ದೇವೇಗೌಡರು ಓಡಾಡುತ್ತಿದ್ದಾರೆ..

ಕಳೆದ ವರ್ಷದ ಕಾವೇರಿ ಹೋರಾಟದಲ್ಲಿ ದೇವೇಗೌಡರು ಉಪವಾಸ ಕುಳಿತು, ಇಡೀ ದೇಶದ ಗಮನ ಸೆಳೆದಿದ್ದು ಜೆಡಿಎಸ್ಗೆ ಮಂಡ್ಯ ಭಾಗದಲ್ಲಿ ಮತ್ತಷ್ಟು ಬಲ ನೀಡಿದೆ. ಇನ್ನು ಉತ್ತರ ಕರ್ನಾಟಕದ ಭಾಗವನ್ನು ಬಲಪಡಿಸುವ ಸಂಕಲ್ಪದೊಂದಿಗೆ, ಎಚ್ಡಿ ಕುಮಾರ ಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಈ ಹೋರಾಟ ಹಾಗೂ ಪ್ರಚಾರಗಳ ಮೂಲಕ ಚುನಾವಣೆ ನಂತರ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗದಿದ್ದರೂ, ಸರ್ಕಾರ ರಚನೆಯಲ್ಲಿ “ಕಿಂಗ್ ಮೇಕರ್” ಆಗುವ ಮೂಲಕ ಅಧಿಕಾರದ ಗದ್ದುಗೆ ಏರಲು ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s