ಜಾತಿಯಾಧಾರಿತ ಚುನಾವಣೆಯಿಂದ ಹೊರಬಂದ ಭಾರತ

-ರಂಜಿತ್ ಹೆಚ್. ಅಶ್ವತ್ಥ್ 
ಪಂಚತಂತ್ರ ಚುನಾವಣೆ ಫಲಿತಾಂಶ ತರಿಸಿದ ಒಂದೇ ಒಂದು ಸಮಾಧಾನವೆಂದರೆ, ಜಾತಿ ಹೊರೆತು ಪಡೆಸಿದ ಚುನಾವಣೆಯ ಕನಸು. 

ಹೌದು, ಸ್ವಾತಂತ್ರ್ಯದ ಬಳಿಕ ನಡೆದುಕೊಂಡು ಬಂದ ಚುನಾವಣಾ ಸಂಪ್ರದಾಯವೆಂದರೆ ಜಾತಿ ಆಧಾರಿತ ಚುನಾವಣಾ ಲೆಕ್ಕಾಚಾರ. ಕಾಂಗ್ರೆಸ್ ನವರಿಗೆ ಅಲ್ಪ ಸಂಖ್ಯಾತರ ವೋಟುಗಳು, ಬಿಜೆಪಿಗೆ ಮುಂದುವರಿದ ಅಥವಾ ಹಿಂದು ಧರ್ಮದ ವೋಟು, ಇನ್ನು ಎಸ್ಪಿ, ಬಿಸ್ಪಿಗೆ  ಹಿಂದುಳಿದ, ದಲಿತರ ವೋಟು ಮೀಸಲೆಂದು. ಆದರೆ ಈ ಬಾರಿಯ ಚುನಾವಣೆಯಲ್ಲಿ ಈ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಜನ ಈ ಜಾತಿ ಆಧಾರಿತ ಚುನಾವಣೆಯಿಂದ ಹೊರಬಂದು ಇನ್ಯಾವುದೋ ಅಂಶಕ್ಕೆ ಒಪ್ಪಿ ಮತ ಹಾಕಿದ್ದಾರೆಂದು ಸಾಬೀತಾಗಿದೆ. 

ಉತ್ತರ ಪ್ರದೇಶ ನೋಡುವುದಾದರೆ, ದಲಿತ, ಹಿಂದುಳಿದ, ಅಲ್ಪ ಸಂಖ್ಯಾತ ವೋಟ್ ಗಳನ್ನು ಬಿಜೆಪಿ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದು ಮೋದಿ ಹವಾ ಅಥವಾ ಅಮಿತ್ ಷಾ ತಂತ್ರಗಾರಿಕೆ ಇದ್ದರೂ, ಜನ ಜಾತಿ ಮರೆತು, ಇನ್ನೊಂದು ವಿಷಯಕ್ಕೆ ಮಣೆ ಹಾಕುತ್ತಿದ್ದಾರೆ ಎನ್ನುವುದಂತು ಸತ್ಯ. 

ಕಾಂಗ್ರೆಸ್‌ಗೆ ಅಂತಿಮ ಗಂಟೆ 

ರಾಹುಲ್ ಗಾಂಧಿ ಅವರನ್ನು ನಾಯಕನೆಂದು ಕಾಂಗ್ರೆಸ್ ಬಿಂಬಿಸುತ್ತ ಹೋಗುತ್ತಿರುವ ಎಲ್ಲ ಚುನಾವಣೆಯಲ್ಲಿಯೂ ಸೋಲನ್ನು ಅನುಭವಿಸುತ್ತಿರುವ ಕಾಂಗ್ರೆಸ್ ಈಗಲಾದರು ಎಚ್ಚೆತ್ತುಕೊಳ್ಳಬೇಕಿದೆ. ಈ ಬಾರಿಯ ಪಂಚರಾಜ್ಯ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವಂತೆ ಅನೇಕರು ಸಲಹೆ ನೀಡಿದ್ದರು. ಆದರೆ ಇದನ್ನು ಕೇಳದೆ  ರಾಹುಲ್ ಗಾಂಧಿಯು ಸೈಕಲ್ ಜೊತೆಗೂಡುವ ತೀರ್ಮಾನದಿಂದ ಕೇವಲ ಕಾಂಗ್ರೆಸ್ ಮಾತ್ರವಲ್ಲದೇ, ಸಮಾಜವಾದಿ ಪಕ್ಷವು ಮಕಾಡೆ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಚುನಾವಣೆ ಬಳಿಕವಾದರೂ, ಕಾಂಗ್ರೆಸ್ ತನ್ನ ವಂಶ ಪಾರಂಪರಿಕ ನಾಯಕತ್ವದಿಂದ ಹೊರಬಂದು, ಎರಡನೇ ಹಂತದ ನಾಯಕರನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ಎದುರಿಸುವ ಅವಶ್ಯಕತೆಯಂತು ಅಗತ್ಯವಿದೆ. 

ಅಮಿತ್ – ಮೋದಿ ಜುಗಲ್ ಬಂದಿ

ಕಳೆದ ಲೋಕಸಭಾ ಚುನಾವಣಾ ಯಿಂದ  ಸರ್ವಾಧಿಕಾರಿಯಂತೆ ಚುನಾವಣೆಗಳಲ್ಲಿ ಹಿಡಿತ ಸಾಧಿಸಿರುವ ಈ ಇಬ್ಬರು ನಾಯಕರು, ಜನರಲ್ಲಿ ವಿಶ್ವಾಸ ಮೂಡಿಸಿರುವುದಂತ್ತು ನಿಜ. ನೋಟು ನಿಷೇಧದ ನಂತರ, ಜನ ಮೋದಿ ವಿರುದ್ಧ ಧಂಗೆ ಏಳುತ್ತಾರೆ, ಇದರ ಪ್ರಯೋಜನ ಪಡೆಯಬಹುದೆಂದು ಭಾವಿಸಿದ್ದ ವಿರೋಧ ಪಕ್ಷಗಳ ಎಲ್ಲ ಲೆಕ್ಕಾಚಾರ ಪಂಚರಾಜ್ಯ ಚುನಾವಣೆಯಲ್ಲಿ ಸೋಲು ಕಂಡಿದೆ. 

ಇನ್ನು ಮೊದಲಿನಿಂದಲೂ ಉತ್ತರ ಪ್ರದೇಶಕ್ಕೆ ಮಾತ್ರ ಹೆಚ್ಚು ಗಮನ ಹರಿಸಿದ್ದ ಬಿಜೆಪಿ ಅಂತಿಮವಾಗಿ ಅದನ್ನು ದಕ್ಕಿಸಿಕೊಳ್ಳುವಲ್ಲಿ ಯಶ ಕಂಡಿದೆ. ಅಕಾಲಿದಳದೊಂದಿಗೆ ಒಲ್ಲದ ಮನಸ್ಸಿನಿಂದಲೇ ಚುನಾವಣೆಗೆ ಹೋಗಿದ್ದ ಬಿಜೆಪಿ, ಪಂಜಾಬ್ ನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದೆ. ಪಂಜಾಬ್ ಈಗ ಕಾಂಗ್ರೆಸ್ಸಿಗಿರುವ ಆಶಾಕಿರಣ ಎಂದರೆ ತಪ್ಪಾಗಲಾರದು. 

ಇನ್ನು ಈಶಾನ್ಯ ರಾಜ್ಯಗಳಲ್ಲಿ ಖಾತೆ ತೆರೆಯಲು ಹವಣಿಸುತ್ತಿದ್ದ ಬಿಜೆಪಿಗೆ ಮಣಿಪುರದಲ್ಲಿ 20ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದದ್ದು, ಸಕಾರಾತ್ಮಕ ಬೆಳವಣಿಗೆಯಾದರೆ, ಚಿಕ್ಕ ರಾಜ್ಯವೆನಿಸಿರುವ ಗೋವಾದಲ್ಲಿಯೂ ಇತರರೊಂದಿಗೆ ಸೇರಿ ಸರ್ಕಾರ ರಚಿಸುವ ಕನಸು ಉಳಿಸಿಕೊಂಡಿದೆ. ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಯಶ ಕಂಡಿದ್ದರಿಂದ, ಬಿಜೆಪಿ ಪಂಜಾಬಿನಲ್ಲಿ ಕಳೆದುಕೊಂಡದ್ದು ಅಲ್ಪ ಎಂದರೆ ತಪ್ಪಾಗಲಾರದು. 

 ಮುಂದಿನ ಗುರಿ ಕರ್ನಾಟಕ

ದೊಡ್ಡ ರಾಜ್ಯಗಳನ್ನು ತಮ್ಮ ಝಂಡಾ ಊರಿರುವ ಬಿಜೆಪಿ ಮುಂದಿನ ದಿನದಲ್ಲಿ ಕರ್ನಾಟಕಕ್ಕೆ ಲಗ್ಗೆ ಇಡಲು ಎಲ್ಲ ಸಿದ್ಧತೆ ನಡೆಸಿಕೊಂಡಿದೆ. ಮುಂದಿನ ವರ್ಷ ನಡೆಯುವ ಕರ್ನಾಟಕ ಹಾಗೂ ಗುಜರಾತ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ಸನ್ನು ಮತ್ತಷ್ಟು ಹೈರಾಣ ಮಾಡುವ ಮಾಸ್ಟರ್ ಪ್ಲಾನ್ ಒಂದನ್ನು ಬಿಜೆಪಿ ಸಿದ್ಧಪಡಿಸಿಕೊಂಡಿದೆ. 

ಕಳೆದ ನಾಲ್ಕು ಅವಧಿಗಳಿಂದ ಗುಜರಾತಿನಲ್ಲಿ ಅಧಿಕಾರದಲ್ಲಿರುವುದರಿಂದ ಸುಲಭವಾಗಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ. ಆದರೆ ದಕ್ಷಿಣ ಭಾರತದಲ್ಲಿ ಪ್ರಮುಖ ರಾಜ್ಯವಾಗಿರುವ ಕರ್ನಾಟಕದಲ್ಲಿ ಗೆಲುವು ಸಾಧಿಸಲು ಬಿಜೆಪಿ ಮಾಸ್ಟರ್ ಮೈಂಡ್ ಅಮಿತ್ ಷಾ ಅವರೇ ಕುಳಿತು, ಚುನಾವಣಾ ರಣತಂತ್ರ ಸಿದ್ಧಪಡಿಸಿ, ಅವಶ್ಯಕತೆಯಿರುವ ಕಡೆ ಮೋದಿ ಅವರ ರೋಡ್ ಶೋಗಳನ್ನು ಬಳಸಿಕೊಂಡು ಕರ್ನಾಟಕವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಲೆಕ್ಕಾಚಾರದಲ್ಲಿದೆ. 

ರಾಷ್ಟ್ರಪತಿ ಚುನಾವಣೆಗೆ ಸಿದ್ಧತೆ
ಮುಂದಿನ ಕೆಲ ತಿಂಗಳಲ್ಲಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಮುಗಿಯಲಿದ್ದು, ಆ ಸ್ಥಾನಕ್ಕೆ ಬಿಜೆಪಿ ಬೆಂಬಲಿತರನ್ನು ಕೂರಿಸಲು, ಶಾಸಕರ, ಸಂಸದರ ಬೆಂಬಲ ಅಗತ್ಯ. ಈ ಪಂಜಾಬ್ ಹೊರೆತು ಪಡೆಸಿ, ನಾಲ್ಕು ರಾಜ್ಯದಲ್ಲಿ ಅಭೂತಪೂರ್ವ ಜಯ ಸಾಧಿಸಿರುವುದರಿಂದ, ರಾಷ್ಟ್ರಪತಿ ಚುನಾವಣೆಯಲ್ಲಿ ತನ್ನ ಅಧಿಪತ್ಯ ಸಾಧಿಸಲು ಸಹಾಯವಾಗಲಿದೆ. ಇದರೊಂದಿಗೆ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕರ ಬೆಂಬಲದೊಂದಿಗೆ ರಾಜ್ಯಸಭೆಯಲ್ಲಿ ಬಲ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ, ಮುಂದಿನ ದಿನದಲ್ಲಿ ನೂತನ ಮಸೂದೆಗಳನ್ನು ವಿರೋಧ ಪಕ್ಷಗಳ ಸಹಾಯವಿಲ್ಲದೇ, ಮಸೂದೆಗಳನ್ನು ಅಂಗೀಕಾರ ಮಾಡಿಕೊಳ್ಳುವ ಯೋಜನೆಯಲ್ಲಿಯೂ ಗೆಲುವು ಸಾಧಿಸಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s